ಕಾನೂನು

ಒಂದು ಸಮಾಜದ ಅನುಸರಣೆಗಾಗಿ ಅಲ್ಲಿಯ ಅಡಳಿತ ವ್ಯವಸ್ಥೆ ಜಾರಿಗೆ ತಂದಂಥ ವಿಧಿಗಳು, ಕಾಯಿದೆಗಳು, ನಿಬಂಧನೆಗಳು ಇತ್ಯಾದಿ : ಇವುಗಳ ಆಧಾರದ ಮೇಲೆ-ತಮ್ಮ ಮುಂದೆ ವಿಚಾರಣೆಗೆ ಬಂದ ಮೊಕದ್ದಮೆಗಳಲ್ಲಿ-ನ್ಯಾಯಾಲಯಗಳು ನೀಡಿದ ತೀರ್ಪುಗಳಲ್ಲಿ-sಸೃಷ್ಟೀಕೃತವಾದ ಸೂತ್ರಗಳು (ಲಾ). ನ್ಯಾಯ, ಕಾನೂನು-ಈ ಶಬ್ದಗಳು ಕೆಲವು ವೇಳೆ ಸಮಾನಾರ್ಥಕಗಳಾಗಿಯೂ ಇನ್ನು ಕೆಲವು ಸಂದರ್ಭಗಳಲ್ಲಿ ಭಿನ್ನಾರ್ಥಕಗಳಾಗಿಯೂ ಬಳಕೆಯಲ್ಲಿವೆ. ನ್ಯಾಯಶಬ್ದ ಸಾಮಾನ್ಯವಾಗಿ ಹೆಚ್ಚು ವ್ಯಾಪಕ. ನಿಸರ್ಗ ನಿಯಮಗಳು, ವಿಜ್ಞಾನ ಸೂತ್ರಗಳು, ವೈಯಕ್ತಿಕ ನಡೆತೆಗೆ ಅನ್ವಯಿಸುವ ವಿಧಿನಿಷೇಧಗಳು, ಧರ್ಮನೀತಿ-ಇದಕ್ಕೆ ಸಂಭಂಧಿಸಿದಂತೆ ಕೂಡ ನ್ಯಾಯಶಬ್ಧವನ್ನು ಬಳಸಲಾಗುತ್ತಿದೆ.

 ಒಂದು ದೇಶದ ನ್ಯಾಯವ್ಯವಸ್ಥೆಯಲ್ಲಿ ಮುಖ್ಯವಾಗಿ ನಾಲ್ಕು ಅಂಗಗಳುಂಟು. ಆ ದೇಶದ ಸಂವಿಧಾನದಲ್ಲಿ ಆವಿಷ್ಕಾರಗೊಂಡ ಹಕ್ಕುಬಾಧ್ಯತೆಗಳೂ ನಿರ್ದೇಶಕ ತತ್ತ್ವಗಳೂ ವಿಧಿಗಳೂ ಅಲ್ಲಿಯ ನ್ಯಾಯವ್ಯವಸ್ಥೆಯ ಅಡಿಪಾಯ. ಒಳಿದೆಲ್ಲ ವಿಧಿ ನಿಷೇಧಿಗಳೂ ನಿಯಮ ನಿಬಂಧನೆಗಳೂ ಇದಕ್ಕೆ ಅಧೀನ : ಇದರಿಂದ ಸೀಮಿತ. ಸಂವಿಧಾನ ಪ್ರೇಷಿತ ಪ್ರಾಧಿಕಾರಗಳಿಂದ (ಅಥಾರಿಟಿ) ಜಾರಿಗೆ ಬಂದ ಕಾಯಿದೆಗಳು ಅನಂತರ ಬರುತ್ತವೆ. ಸಂಸತ್ತೂ ರಾಜ್ಯ ವಿಧಾನಮಂಡಲಗಳೂ ಕಾಯಿದೆಗಳನ್ನು ರಚಿಸುತ್ತವೆ. ಇವು ಒಟ್ಟಿನಲ್ಲಿ ಕಾನೂನು ಎನಿಸಿಕೊಳ್ಳತ್ತವೆ. ಸಂವಿಧಾನದ ವಿಧಿಗಳ ಮತ್ತು ಪ್ರಾಧಿಕಾರವಿಚಿತ ಕಾಯಿದೆಗಳ ಅನ್ವಯಕ್ಕೆ ಸಂಬಂಧಿಸಿದಂತೆ, ಅವುಗಳ ಆಧಾರದ ಮೇಲೆ. ದೇಶದ ನ್ಯಾಯಾಲಯಗಳು ನೀಡುವ ತೀರ್ಪುಗಳೂ ವ್ಯಾಖ್ಯಾನಗಳೂ ನ್ಯಾಯವ್ಯವಸ್ಥೆಯಲ್ಲಿ ಸೇರಿಕೊಳ್ಳುತ್ತವೆ. ಇವು ಅನ್ವಯಿಕ ನ್ಯಾಯ. ನ್ಯಾಯಾಲಯಗಳು ಹೊಸದಾಗಿ ಕಾನೂನನ್ನು ಸೃಷ್ಟಿಸಲಾರವು. ಜಾರಿಯಲ್ಲಿರುವ ಕಾನೂನನ್ನು ವಿವರಿಸುವುದು. ಅರ್ಥೈಸುವುದು. ಅದಕ್ಕನುಗುಣವಾಗಿ ಆದೇಶಗಳನ್ನು ನೀಡುವುದು-ಇದು ನ್ಯಾಯಾಲಗಳ ಕಾರ್ಯಭಾರ. ನ್ಯಾಯವ್ಯವಸ್ಥೆಯ ಇನ್ನೊಂದು ಅಂಗವೆಂದರೆ ಸಂಪ್ರದಾಯ, ಪದ್ಧತಿ, ಕಟ್ಟಳೆ. ಮೊದಲನೆಯ ಮೂರು ಸಂಸ್ಥೆಗಳಿಂದ ರಚಿತವಾದವಾದರೆ ಇದು ಪರಂಪರಾಗವಾದ್ದು. ರೂಢಿಯಲ್ಲಿ ಬಂದದ್ದು. ಅವು ಅರ್ವಾಚೀನವಾದರೆ ಇದು ಪ್ರಾಚೀನ. ಹಿಂದಿನ ಕಾಲದಲ್ಲಿ ಸಂಪ್ರದಾಯದ ಕಟ್ಟುಕಟ್ಟಳೆಗಳೇ ಪ್ರಬಲವಾಗಿದ್ದುವು. ನಾಗರಿಕ ಜೀವನಕ್ಷೇತ್ರದ ಬಹು ಭಾಗವನ್ನಾರಿಸಿಕೊಂಡಿದ್ದುವು. ಹಿಂದೆ ಸಂಪ್ರದಾಯಕ್ಷೇತ್ರದಲ್ಲಿದ್ದ ಎಷ್ಟೋ ವಿಚಾರಗಳಿಗೆ ಸಂಬಂಧಿಸಿದಂತೆ ಈಗ ಸಂಸ್ಥೆಗಳಿಂದ ರಚಿತವಾದ ನ್ಯಾಯವೇ ಜಾರಿಗೆ ಬಂದಿದೆ. ಆದರೂ ಮತೀಯ ಆಚರಣೆಗಳು, ಗಂಡು ಹೆಣ್ಣುಗಳ ಸಂಬಂಧ-ಮುಂತಾದ ಅನೇಕ ವಿಚಾರಗಳಲ್ಲಿ ಸಂಪ್ರದಾಯ ನ್ಯಾಯ ಇಂದೂ ಬಹುತೇಕ ಜಾರಿಯಲ್ಲಿದೆ. ಅಲ್ಲದೆ ಒಂದೊಂದು ವಿಶಿಷ್ಟ ಸಮುದಾಯಕ್ಕೂ ಜಾತಿಮತಗಳಿಗೂ ಪ್ರತ್ಯೇಕವಾದ ಸಂಪ್ರದಾಯಗಳೇ ಇರುವುದುಂಟು. ಆಡಳಿತ ವ್ಯವಸ್ಥೆ ಆಧುನಿಕವಾದಂತೆಲ್ಲ ಸಂಪ್ರದಾಯನ್ಯಾಯದ ಕ್ಷೇತ್ರ ಕಿರಿದಾಗುತ್ತಿದೆ. ಬುದ್ದಿಪೂರ್ವಕವಾಗಿ ಜಾರಿಗೆ ತರಲಾದ ನ್ಯಾಯದ ಭಾಗವೇ ಅಧಿಕವಾಗುತ್ತಿದೆ. ಈ ಭಾಗವನ್ನು ಸ್ಥೂಲವಾಗಿ ಕಾನೂನು ಎಂದು ಇಲ್ಲಿ ಸಂಭೋಧಿಸಲಾಗಿದೆ. ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ವಿವಿಧ ಕಾಯಿದೆಗಳ, ನಿಬಂಧನೆಗಳ, ನಿಯಮಾವಳಿಗಳ ಮತ್ತು ನ್ಯಾಯಾಲಯಗಳ ತೀರ್ಪುಗಳ ಸಮೂಹವನ್ನೂ ಕಾನೂನು ಎನ್ನುವುದು ವಾಡಿಕೆ (ಉದಾ : ಕಾರ್ಮಿಕ ಕಾನೂನು).

 ಕಾನೂನುಕಟ್ಟಳೆಗಳ ನ್ಯಾಯವ್ಯವಸ್ಥೆ ಮಾನವನ ಸಾಮಾಜಿಕ ರಾಜಕೀಯಬೆಳೆವಣಿಗೆಯ ಅತ್ಯಂತ ಪ್ರಮುಖ ಅಭಿವ್ಯಕ್ತಿಗಳಲ್ಲೊಂದು. ಆದ್ದರಿಂದ ಸಮಾಜದ ಸ್ವರೂಪವನ್ನರಿತುಕೊಳ್ಳಲು ಈ ವ್ಯವಸ್ಥೆಯ ಅಂತರ್ದರ್ಶನ ಪಡೆಯಬೇಕಾದ್ದು ಅವಶ್ಯ. ನ್ಯಾಯದ ಅರ್ಥ, ಸ್ವರೂಪ, ಉದ್ದೇಶ, ಇತರ ಶಾಸ್ತ್ರಪ್ರಕಾರಗಳಿಗೂ ಇದಕ್ಕೂ ಇರುವ ಸಂಬಂಧ, ಇದರ ವಿಕಾಸಕ್ಕೆ ಕಾರಣವಾದ ಪ್ರಭಾವಗಳು, ವಿವಿಧ ನ್ಯಾಯಪಂಥಗಳು-ಇವನ್ನೆಲ್ಲನ್ಯಾಯತತ್ತ್ವ (ಜೂರಿಸ್ಪ್ರೂಡೆನ್ಸ್) ಎಂಬ ಲೇಖನದಲ್ಲಿ ವಿವೇಚಿಸಲಾಗಿದೆ. ನ್ಯಾಯವೃತ್ತಿ (ಲೀಗಲ್ ಪ್ರೊಫೆಷನ್) ಎಂಬ ಲೇಖನದಲ್ಲಿ ವಕೀಲರ ಕಾರ್ಯಭಾರ, ಅವರ ವಿವಿಧ ಹೊಣೆಗಳು. ಅವರ ವೃತ್ತಿಯ ಸಂಘಟನೆಯನ್ನು ಕುರಿತ ವಿಚಾರಿಗಳು-ಇವೆಲ್ಲ ಇವೆ. ನ್ಯಾಯಕ್ಷೇತ್ರದಲ್ಲಿ ನ್ಯಾಯವಾದಿಗಳು ಕೈಗೊಳ್ಳುವ ಕ್ರಮಗಳು, ಪ್ರತಿಕ್ರಮಗಳು ಮುಂತಾದವಕ್ಕೆ ಆಧಾರಭೂತವಾದ ವಿಧಿನಿಯಮಗಳನ್ನು ಕುರಿತ ವಿಷಯಗಳನ್ನು ನ್ಯಾಯಪ್ರಕ್ರಿಯೆ (ಲೀಗಲ್ ಪ್ರೊಸೀಜರ್) ಎಂಬ ಲೇಖನದಲ್ಲಿ ಕೊಡಲಾಗಿದೆ. ನಾನಾ ದೇಶಗಳ ನ್ಯಾಯವ್ಯವಸ್ಥೆಗಳ ತಿಳಿವಳಿಕೆ ಪಡೆಯಲು ಅಯಾ ದೇಶಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಕೊಡಲಾದ ಲೇಖನಗಳನ್ನು ನೋಡಿ. ಇವಲ್ಲದೆ ಸಿವಿಲ್ ನ್ಯಾಯ. ಅಪರಾಧ ನ್ಯಾಯ (ಕ್ರಿಮಿನಲ್ ಲಾ). ಸಂವಿಧಾನ ನ್ಯಾಯ (ಕಾನ್‍ಸ್ಟಿಟ್ಯೂಷನಲ್ ಲಾ). ವಾಣಿಜ್ಯ ನ್ಯಾಯ (ಕಮರ್ಷಿಯಲ್ ಲಾ), ಕಾರಾರು ಕಾಯಿದೆ (ಕಾಂಟ್ರಾಕ್ಟ್ ಆಕ್ಟ್), ಸರಕುಗಳ ಮಾರಾಟ ಕಾಯಿದೆ (ಸೇಲ್ ಆಫ್ ಗೂಡ್ಸ್ ಆಕ್ಟ್), ವ್ಯಾಪಾರ ಚಿಹ್ನೆಗಳ ಕಾಯಿದೆ, ಕೃತಿಸ್ವಾಮ್ಯ, ಸಮುದ್ರಯಾನ ಕಾನೂನು. ಕಾರ್ಮಿಕ ಕಾನೂನು ಮುಂತಾದ ಅನೇಕ ವಿಶಿಷ್ಟ ವಿಷಯಗಳ ಬಗ್ಗೆ ವಿಶ್ವಕೋಶದಲ್ಲಿ ಪ್ರತ್ಯೇಕ ಲೇಖನಗಳಿವೆ. ನ್ಯಾಯಶಿಕ್ಷಣ. ಪ್ರಸಿದ್ಧ ನ್ಯಾಯಪಂಡಿತರ ಜೀವನ ಸಾಧನಗಳ ಪರಿಚಯಗಳು-ಇವನ್ನು ಕುರಿತ ಪ್ರಸಿದ್ಧ ನ್ಯಾಯಪಂಡಿತರ ಜೀವನ ಸಾಧನೆಗಳ ಪರಿಚಯಗಳು-ಇವನ್ನು ಕುರಿತ ಲೇಖನಗಳನ್ನೂ ಕೊಡಲಾಗಿದೆ.         

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ